ಬೆಂಗಳೂರು,ಏ,೧೬:ಉತ್ತರ ಕರ್ನಾಟಕ ಭಾಗದ ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಡಲು ಹೆಣಗಾಡುತ್ತಿರುವ ರಾಜ್ಯ ಬಿಜೆಪಿ ಸರ್ಕಾರ ಇದೀಗ ಶಾಸಕರ ವಸತಿಗಾಗಿ ಹಳೆಯ ಕಟ್ಟಡ ಕೆಡವಿ ಐದಂತಸ್ತಿನ ಐಶಾರಾಮಿ ವಸತಿ ಸಂಕಿರ್ಣ ನಿರ್ಮಿಸಲು ಮುಂದಾಗಿದೆ.
ವಿಧಾನಸೌಧ ಸಮೀಪದ ಶಾಸಕರ ಭವನದಲ್ಲಿರುವ ಎರಡಂತಸ್ತಿನ ಹಳೆಯ ಕಟ್ಟಡವನ್ನು ಕೆಡವಿ, ಆಧುನಿಕ ಸೌಕರ್ಯಗಳನ್ನೊಳಗೊಂಡ ವಸತಿ ಸಂಕಿರ್ಣವನ್ನು ನಿರ್ಮಿಸಲು ಪ್ರಕ್ರಿಯೆ ಆರಂಭಿಸಿದೆ.
ನೂತನ ವಸತಿ ಸಂಕಿರ್ಣದಲ್ಲಿ ನೆಲ ಮಹಡಿ ಸಂಪೂರ್ಣವಾಗಿ ವಾಹನ ನಿಲುಗಡೆಗೆ ಮೀಸಲಾಗಿದೆ. ಇದರ ಮೇಲೆ ಐದು ಅಂತಸ್ತಿನ ಕಟ್ಟಡ ತಲೆ ಎತ್ತಲಿದ್ದು, ಇಲ್ಲಿ ೫೦ ಮಂದಿಗೆ ದೊಡ್ಡ ದೊಡ್ಡ ಕೊಠಡಿಗಳನ್ನೊಳಗೊಂಡ ವಸತಿ ಸೌಲಭ್ಯ ದೊರೆಕಿಸಿಕೊಡಲು ಸಜ್ಜಾಗಿದೆ.
ನೆಹರು ಓಲೇಕಾರ್ ನೇತೃತ್ವದ ಶಾಸಕರ ವಸತಿ ಕುರಿತ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಶಾಸಕರ ಬೇಡಿಕೆಯ ಹಿನ್ನೆಲೆಯಲ್ಲಿ ಹಳೆಯ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಲು ತೀರ್ಮಾನಿಸಲಾಗಿದೆ.
ಕಳೆದ ೧೯೭೮ - ೭೯ ರಲ್ಲಿ ಈಗಿರುವ ಎಲ್.ಎಚ್ - ೨ ಕಟ್ಟಡವನ್ನು ೩೬ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಇದೀಗ ಹೊಸ ಕಟ್ಟಡ ನಿರ್ಮಿಸುವ ಸಲುವಾಗಿ ರಾಜ್ಯದ ಮುಖ್ಯ ಆರ್ಕಿಟೆಕ್ಟ್ ನೇತೃತ್ವದಲ್ಲಿ ಹೊಸ ಕಟ್ಟಡದ ವಿನ್ಯಾಸ ಸಿದ್ಧಪಡಿಸಲಾಗುತ್ತಿದೆ. ಈ ಮಾಸಾಂತ್ಯದ ವೇಳೆಗೆ ವಿನ್ಯಾಸ ಸಿದ್ಧವಾಗಲಿದೆ.
ಪ್ರಾಥಮಿಕ ಯೋಜನೆಯ ಪ್ರಕಾರ ಈಗಿರುವ ಕಟ್ಟಡದ ಬಳಿ ಎರಡು ವಿಭಾಗಗಳಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ. ಕಟ್ಟಡಕ್ಕಾಗಿ ಲೋಕೋಪಯೋಗಿ ಇಲಾಖೆ ೧೫ ಕೋಟಿ ರೂಪಾಯಿ ಮೊತ್ತದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ೪೩೦೦ ಚದರ ಅಡಿ ಪ್ರದೇಶದಲ್ಲಿ ನೂತನ ಕಟ್ಟಡ ತಲೆ ಎತ್ತಲಿದೆ.
ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ವಿಧಾನಸೌಧ ಸಮೀಪ ಇದ್ದ ಸರ್ಕಾರಿ ಮುದ್ರಣಾಲಯವನ್ನು ಧ್ವಂಸಗೊಳಿಸಿ ಅಲ್ಲಿ ವಿಕಾಸ ಸೌಧ ನಿರ್ಮಿಸಲಾಗಿತ್ತು. ಇದೀಗ ಶಾಸಕರ ಭವನದಲ್ಲಿ ಹಳೆಯ ಕಟ್ಟದ ಜಾಗದಲ್ಲಿ ಹೊಸ ಕಟ್ಟಡ ನಿರ್ಮಿಸಲು ಬಿಬಿಎಂಪಿ ಚುನಾವಣೆಯ ನೀತಿ ಸಂಹಿತೆ ಅಡ್ಡಿಯಾಗಿತ್ತು. ಕಳೆದ ಮಾರ್ಚ್ ತಿಂಗಳಲ್ಲಿಯೇ ಈ ಕುರಿತಾದ ಪ್ರಸ್ತಾವನೆಗೆ ಅನುಮೋದನೆ ಸಿಗಬೇಕಾಗಿತ್ತು. ಆದರೆ ಗ್ರಾಮ ಪಂಚಾಯತ್ ಚುನಾವಣೆ ನೀತಿ ಸಂಹಿತೆ ಇದಕ್ಕೆ ಅಡ್ಡಿಯಾಗುವ ಸಾಧ್ಯತೆಯಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.